ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಕನ್ನಡದ ಶ್ರೀಮಂತಿಕೆ ಹೆಚ್ಚಿಸಿದ ಯಕ್ಷಗಾನ ಸಾಹಿತ್ಯ

ಲೇಖಕರು :
ಅವಿನಾಶ್ ಬಿ.
ಗುರುವಾರ, ಜನವರಿ 28 , 2016

ಶಬ್ದಾಲಂಕಾರಭರಿತವಾದ ಈ ಸಾಹಿತ್ಯ ನೋಡಿ.

ಅಂಜದುಸುರುವೆ ಕೇಳ್ ಧನಂಜಯನೆ ಲಾಲಿಸೈ
ಸಂಜಾತ ಧನಪತಿಗೆ ಕುಂಜರನ ಪೆಸರೆನಗೆ
ಕಂಜಜನ ಸಭೆಯಿಂದ ರಂಜಿಪ ವಿಮಾನದಿಂ ಮುಂಜಾನೆ ಬರುತಿರಲ್ಕೆ॥

ಸಂಜನಿಸಿ ಹಯಕೆ ಬೆವರೆಂಜಲಂದದೊಳಿಳಿದು
ಕಂಜಲೋಚನನು ಪಿಡಿದಂಜಲಿಗೆ ಬೀಳಲದು
ಭಂಜಿಸುವೆ ದಿನವೆಂಟು ಸಂಜೆಯೊಳಗೆನುತೆನ್ನನಂಜಿಸಿದ ಕೃಷ್ಣ ಕೇಳೈ


ಹಳೆಮಕ್ಕಿ ರಾಮ ಬರೆದ 'ಕಷ್ಣಾರ್ಜುನ ಕಾಳಗ'ದ ಪದ್ಯವಿದು. ಈ ಪರಿಯ ಅಸಂಖ್ಯ ಸಾಹಿತ್ಯದ ಮೂಲಕ ಯಕ್ಷಗಾನದ ಕವಿಗಳು ಕನ್ನಡ ಸಾರಸ್ವತ ಲೋಕವನ್ನು ಸದ್ದಿಲ್ಲದೇ ಸಮೃದ್ಧಗೊಳಿಸುತ್ತಿದ್ದಾರೆ. ಆದರಿದು ಅವಜ್ಞೆಗೊಳಗಾಗಿದೆ ಎಂಬ ಸತ್ಯ ದರ್ಶನಕ್ಕಾಗಿ ಈ ಲೇಖನ.

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜನರ ಉಚ್ಚಾರ, ಮತ್ತು ಮಾತಿನ ಧಾಟಿಯಲ್ಲಿ ಯಕ್ಷಗಾನದ ಪ್ರಭಾವವನ್ನು ನಾವು ಕಾಣಬಹುದು. ಈ ಹೊತ್ತಿಗೆ ಯಕ್ಷಗಾನವು ಸೀಮೋಲ್ಲಂಘನ ಮಾಡಿ ವಿಶ್ವಗಾನವಾಗುತ್ತಲೇ, ಬೇರಾವುದೇ ಕಲೆಗಳಿಗಿಂತ ಭಿನ್ನವಾಗಿ, ಆಹಾರ್ಯ (ವೇಷ-ಬಣ್ಣಗಾರಿಕೆ), ವಾಚಿಕ (ಮಾತುಗಾರಿಕೆ), ಆಂಗಿಕಾಭಿನಯ, ನೃತ್ಯಾಭಿನಯ ಜತೆಗೆ ಸಂಗೀತ ಮೇಳೈಸಿದ ಒಂದು ರಮ್ಯಾದ್ಭುತ ಕಲೆ, ನೂರಾರು ವರ್ಷಗಳಿಂದ ಕನ್ನಡವನ್ನು, ಜತೆಗೆ ಸಮೃದ್ಧ ಸಾಹಿತ್ಯಲೋಕವೊಂದನ್ನು ಪೋಷಿಸಿಕೊಂಡು ಬರುತ್ತಿದೆ.

ಕನ್ನಡವನ್ನು ಹದ ತಪ್ಪದಂತೆ, ಬೇರೆ ಭಾಷೆಗಳ ಆಕ್ರಮಣದಿಂದ ರಕ್ಷಿಸುತ್ತಾ, ಐದಾರು ಶತಕಗಳಿಂದ ಮುಂದಿನ ಪೀಳಿಗೆಗೆ ಕಾಪಿಡುವ ಅನೂಹ್ಯ ಮತ್ತು ಅಮೂಲ್ಯ ಕಾಯಕವನ್ನು ಮಾಡುತ್ತಿದೆ ಯಕ್ಷಗಾನ. ಇಲ್ಲಿ ಮುಖ್ಯತಃ ಮೂರು ವಿಭಾಗಗಳಲ್ಲಿ ಸಾಹಿತ್ಯ ಲೋಕ ಸಷ್ಟಿಯಾಗುತ್ತಿದೆ.

ಪ್ರಸಂಗ ಪದ್ಯ ರಚನೆ:

ಒಂದನೆಯದು, ತಾಳ, ರಾಗ ಸಹಿತ, ನವರಸಗಳುಳ್ಳ, ಛಂದೋ-ಲಯಬದ್ಧವಾದ ಹಾಡುಗಳ ರಚನೆ. ಸರಸ-ವಿರಸ ಸಂಭಾಷಣೆಯಿಂದ ಕೂಡಿದ ಪದ್ಯಗಳೊಂದಿಗೆ, ನಿರ್ದಿಷ್ಟ ಕಾಲಮಿತಿಯೊಳಗೆ ಆಡಿ ತೋರಿಸಬಹುದಾದಂತಹಾ, ನಿರ್ದಿಷ್ಟ ರಸಾತ್ಮಕ ಕಥಾವಸ್ತುವನ್ನು, ಪ್ರಸಂಗವನ್ನು, ಘಟನೆಯನ್ನು ಕಟ್ಟಿಕೊಡುವ ಸಾಹಿತ್ಯ ಭಂಡಾರವಿಲ್ಲಿದೆ. ಬೇರೆ ಕ್ಷೇತ್ರಗಳಲ್ಲಿರುವಂತೆ ಇಲ್ಲಿ ನಿರ್ದಿಷ್ಟ ರಾಯಧನ ಇರುವುದಿಲ್ಲ. ಎಲ್ಲವೂ ಬಹುತೇಕ ಉಚಿತ ಸಾಹಿತ್ಯ ಸೇವೆಯಾಗಿ ಮುಂದುವರಿದಿವೆ.

ದೇವಿ ಮಹಾತ್ಮೆ ಕೃತಿಯಂತೂ ಕೋಟ್ಯಂತರ ಪ್ರದರ್ಶನಗಳನ್ನು ಕಂಡಿದ್ದು, ಜಾಗತಿಕ ದಾಖಲೆಗೆ ಯೋಗ್ಯವಾದ ಕೃತಿ. ಅತ್ಯಂತ ಜನಪ್ರಿಯವಾಗಿರುವ ಮಹಾಭಾರತದೊಳಗಣ ಕಥಾನಕಗಳುಳ್ಳ ಪ್ರಸಂಗಗಳಿಗೆ ಲಕ್ಷ್ಮೀಶನ ಜೈಮಿನಿ ಭಾರತವೇ ಮೂಲ ಪ್ರೇರಣೆ. ಈ ಕೃತಿಗಳಲ್ಲಿ ಭಾಮಿನಿ, ವಾರ್ಧಕ ಷಟ್ಪದಿಗಳು ಢಾಳಾಗಿ ಬಳಕೆಯಾಗಿವೆ.

ಒಂದೇ ಪ್ರಸಂಗಗಳನ್ನು ಹಲವು ಕವಿಗಳು ಬರೆದಿರಬಹುದು. ಕೆಲವು ಹಸ್ತಪ್ರತಿಗಳು, ಕೆಲವು ಅಚ್ಚುಮೊಳೆಯಲ್ಲಿ ಮುದ್ರಣವಾದವು. ನಿತ್ಯಾನಂದ ಗ್ರಂಥಾಲಯ, ಪಾವಂಜೆ ಗುರುರಾವ್ ಆ್ಯಂಡ್ ಸನ್ಸ್, ಶ್ರೀಮನ್ಮಧ್ವ ಸಿದ್ಧಾಂತ ಗ್ರಂಥಾಲಯ... ಹೀಗೆ ಅದೆಷ್ಟೋ ಪ್ರಕಾಶನ ಸಂಸ್ಥೆಗಳ ಸಾವಿರಾರು ಕತಿಗಳು ಯಕ್ಷಗಾನ ಭಾಗವತರ ಮನೆಗಳಲ್ಲಿ, ಕಲಾವಿದರ ಮನೆಗಳಲ್ಲಿವೆ. ಬಭ್ರುವಾಹನ, ಪಾಂಡವಾಶ್ವಮೇಧ, ಪ್ರಮೀಳಾರ್ಜುನ, ಲವ ಕುಶ, ಕರ್ಣಾರ್ಜುನ, ಸುಧನ್ವ, ಕಷ್ಣಲೀಲೆ ಮುಂತಾದವಲ್ಲದೆ, ಕಾಂತಬಾರೆ ಬೂದಬಾರೆ, ಕೋಟಿ ಚೆನ್ನಯ, ಶಂಭು ಕಲ್ಕುಡ, ಅಬ್ಬಗ ದಾರಗೆ ಮುಂತಾದ ತುಳು ಪ್ರಸಂಗಗಳೂ ಜನಮನ್ನಣೆ ಪಡೆದಿವೆ. ಈ ಪರಿಯಾಗಿ ಸಾವಿರಾರು ಕಥಾನಕಗಳು ಹಲವು ಕವಿಗಳ ಕಾವ್ಯಚಿತ್ರಣಕ್ಕೊಳಪಟ್ಟು, ಪ್ರಸಂಗಗಳಾಗಿ ರೂಪುಗೊಂಡಿವೆ. ಹಿಂದೆಲ್ಲಾ ಭಾಗವತರ (ಹಾಡುವವರ) ಸ್ಮರಣಶಕ್ತಿಯ ಪ್ರತೀಕವಾಗಿ ಆಶು ಸಾಹಿತ್ಯಗಳಾಗಿ, ಮೌಖಿಕ ಸಾಹಿತ್ಯವಾಗಿಯೂ ಯಕ್ಷಗಾನವು ಮೆರೆದದ್ದಿದೆ.

ದೇರಾಜೆ ಸೀತಾರಾಮಯ್ಯ,
ಪಾರ್ತಿಸುಬ್ಬ, ಮುದ್ದಣರಂಥ ಮೇರು ಕವಿಗಳು ಹಾಕಿಕೊಟ್ಟ ಶ್ರೀಕಾರಕ್ಕೆ ದೇವಿದಾಸ ಕವಿ, ಹಟ್ಟಿಯಂಗಡಿ ರಾಮಭಟ್ಟ, ಕೀರಿಕ್ಕಾಡು ವಿಷ್ಣು ಮಾಸ್ತರ್, ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ, ದೇರಾಜೆ ಸೀತಾರಾಮಯ್ಯ, ಬಲಿಪ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ಶೇಣಿ ಗೋಪಾಲಕಷ್ಣ ಭಟ್, ಮಲ್ಪೆ ರಾಮದಾಸ ಸಾಮಗ, ಕಾಳಿಂಗ ನಾವಡ, ಗೇರುಸೊಪ್ಪೆ ಶಾಂತಪ್ಪಯ್ಯ, ಧ್ವಜಪುರದ ನಾಗಪ್ಪಯ್ಯ, ಸಂಕಯ್ಯ ಭಾಗವತ, ಬಳಕಿನ ವಿಷ್ಣ್ವಯ್ಯ, ಸೀತಾನದಿ ಗಣಪಯ್ಯ ಶೆಟ್ಟಿ, ಹೊಸ್ತೋಟ ಮಂಜುನಾಥ ಭಾಗವತ, ಅನಂತರಾಮ ಬಂಗಾಡಿ, ಅಮತ ಸೋಮೇಶ್ವರ, ಅಂಬೆಮೂಲೆ ಗೋವಿಂದ ಭಟ್, ಅಂಬಾತನಯ ಮುದ್ರಾಡಿ, ಕಬ್ಬಿನಾಲೆ ವಸಂತ ಭಾರದ್ವಾಜ, ಕಡತೋಕ ಮಂಜುನಾಥ ಭಾಗವತ, ಬಾಬು ಕುಡ್ತಡ್ಕ, ಡಾ.ಶಿಮಂತೂರು ನಾರಾಯಣ ಶೆಟ್ಟಿ, ಪುರುಷೋತ್ತಮ ಪೂಂಜ, ಶ್ರೀಧರ ಡಿ.ಎಸ್., ಎಂ.ಎ. ಹೆಗಡೆ, ಗಿಂಡಿಮನೆ ಮೃತ್ಯುಂಜಯ, ಕುಳಾಯಿ ಮಾಧವ ಭಂಡಾರಿ, ಕಂದಾವರ ರಘುರಾಮ ಶೆಟ್ಟಿ, ಕುಬೆವೂರು ಪುಟ್ಟಣ್ಣ ಶೆಟ್ಟಿ, ಗಣೇಶ ಕೊಲೆಕಾಡಿ, ರಾಘವ ನಂಬಿಯಾರ್, ತಾರಾನಾಥ ವರ್ಕಾಡಿ, ಮನೋಹರ ಕುಮಾರ್, ನಿತ್ಯಾನಂದ ಕಾರಂತ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ದೇವದಾಸ ಈಶ್ವರಮಂಗಲ... ಹೀಗೆ ಅದೆಷ್ಟೋ ಯಕ್ಷಗಾನ ಕವಿಗಳು ಧ್ವನಿಗೂಡಿಸಿದ್ದಾರೆ. ಪೌರಾಣಿಕ, ಜಾನಪದೀಯ, ಐತಿಹಾಸಿಕ ಹಾಗೂ ಕಾಲ್ಪನಿಕ ಕಥಾನಕಗಳನ್ನು ಸೃಜಿಸಿದ್ದಾರೆ. ಇದರ ಜತೆಗೆ, ಏಡ್ಸ್, ಅನಕ್ಷರತೆ ತಡೆಯುವ ಜಾಗೃತಿ ಮೂಡಿಸುವ ಸಾಮಯಿಕ ಮಹತ್ವದ ಪ್ರಸಂಗಗಳೂ ರೂಪುಗೊಂಡಿವೆ.

ವಿಮರ್ಶೆ, ಆತ್ಮಕಥನ:

ಎರಡನೆಯದು, ಯಕ್ಷಗಾನದ ಕುರಿತಾಗಿ ಪ್ರಕಟವಾಗಿರುವ ಲೇಖನಗಳು, ವಿಮರ್ಶೆಗಳು, ಅಧ್ಯಯನ ಬರಹಗಳು, ಹಾಗೂ ಕಲಾವಿದರ ಬದುಕನ್ನು ಬಿಂಬಿಸುವ ಬರಹಗಳ ಕತಿಗಳು. ಇತ್ತೀಚೆಗಂತೂ ಇವುಗಳ ಸಂಖ್ಯೆ ಹೆಚ್ಚಾಗುತ್ತಿವೆ.

ಆಶು ಸಾಹಿತ್ಯ:

ಮೂರನೆಯದೆಂದರೆ ದಾಖಲೆಗೆ ದುರ್ಲಭವಾದ ಆಶು ಸಾಹಿತ್ಯ. ನಿರ್ದಿಷ್ಟ ಪ್ರಸಂಗದಲ್ಲಿ ಆಯಾ ಪಾತ್ರಗಳನ್ನು ಪೋಷಿಸುವ ವೇಷ ಅಥವಾ ಅರ್ಥಧಾರಿಯ ಅಸ್ಖಲಿತ ಮಾತುಗಳು. ಈಗಿನ ಡಿಜಿಟಲ್ ಯುಗದಲ್ಲಿ ಸಾಕಷ್ಟು ಜನರು ಎಂಪಿ3 ಸ್ವರೂಪದಲ್ಲಿ, ಈ ಮಾತುಗಳನ್ನು (ಯಕ್ಷಗಾನದ ಪರಿಭಾಷೆಯಲ್ಲಿ ಅರ್ಥ ಎನ್ನುತ್ತಾರೆ) ಕಾಪಿಟ್ಟುಕೊಂಡು, ಕೇಳಿ ಆನಂದಿಸುತ್ತಾರೆ; ತಮ್ಮ ಪದ ಭಂಡಾರವನ್ನು, ತಮ್ಮೊಳಗಿನ ಕನ್ನಡ ಭಾಷೆಯನ್ನು ಪೋಷಿಸಿಕೊಳ್ಳುತ್ತಾರೆ. ಇಂದು ಹೇಳಿದ ಅರ್ಥ ವೈಭವ, ನಾಳೆ ಇರಲಾರದು. ಕಥೆಯ ಚೌಕಟ್ಟಿನಲ್ಲೇ ಅವರ ಮಾತು ಇರುತ್ತದೆಯಾದರೂ, ಪಾತ್ರಪೋಷಣೆ ಭಿನ್ನವಾಗಿರಬಹುದು. ಹೊಸ ಪದಗಳ ಪ್ರಯೋಗ, ಹೊಸ ಸಾಹಿತ್ಯ ಸಷ್ಟಿಗೆ ಹೇತುವಾಗಬಹುದು. ಇಂಥದ್ದೊಂದು ಅದ್ಭುತ ವಾಗ್ವಿಲಾಸವನ್ನು ಪ್ರದರ್ಶಿಸಲು ಪಾತ್ರಧಾರಿಗಳು ಮಾಡುವ ಅಧ್ಯಯನವಿದೆಯಲ್ಲ... ನಗರ ಕೇಂದ್ರಿತ ಸಾಹಿತ್ಯವಲಯದಲ್ಲಿ ಅಂಥದ್ದೊಂದು ವೈಖರಿ ಕಾಣುವುದು ತೀರಾ ಎನ್ನಿಸುವಷ್ಟರ ಮಟ್ಟಿಗೆ ಅಪರೂಪವಿರಬಹುದು.

ಇನ್ನೂ ಒಂದು ಅತ್ಯಂತ ಅಚ್ಚರಿಯ ವಿಷಯ. ಕನ್ನಡದ ಈ ಶ್ರೀಮಂತ ಸಾಹಿತ್ಯ ಪ್ರಕಾರವನ್ನು, ಕಲೆಯನ್ನು ಪೋಷಿಸಿಕೊಂಡು ಬರುತ್ತಿರುವವರ ಮಾತಭಾಷೆ ಯಾರದ್ದು ಕೂಡ ಅಚ್ಚಕನ್ನಡವಲ್ಲ. ಅವರಲ್ಲಿ ಬಹುತೇಕರು ಒಂದೋ ತುಳು, ಅಥವಾ ಮಲಯಾಳಂ, ಇಲ್ಲವೇ ಕುಂದಗನ್ನಡ, ಹವಿಗನ್ನಡ, ಕೊಂಕಣಿ, ಮರಾಠಿ, ಚಿತ್ಪಾವನೀಯನ್ನು ತಾಯ್ನುಡಿಯಾಗಿ ಹೊಂದಿರುವವರು! ಮತ್ತೊಂದು ಅಚ್ಚರಿ- ಯಕ್ಷಗಾನ ಕ್ಷೇತ್ರದಲ್ಲಿ ಹಾಡುಗಾರಿಕೆಯಲ್ಲೋ, ಅರ್ಥವೈಭವದಲ್ಲೋ ಇಂದು ಸಿದ್ಧಿ-ಪ್ರಸಿದ್ಧಿ ಪಡೆದ ಹಿರಿಯರೆಲ್ಲರೂ ಒಂದೋ ಶಾಲೆಗೆ ಹೋಗದವರು ಅಥವಾ ಪೂರ್ವಪ್ರಾಥಮಿಕ ಶಾಲೆಗಷ್ಟೇ ಸೀಮಿತವಾಗಿ ಯಕ್ಷಗಾನದತ್ತ ಆಕರ್ಷಿತರಾದವರು. ಅವರ ವಾಗ್ವೈಖರಿ, ಅವರ ಉಚ್ಚಾರ ಸ್ಪಷ್ಟತೆ, ನಿರ್ದಿಷ್ಟ ಪದ ಪ್ರಯೋಗದ ಬಗೆಗಿನ ಜ್ಞಾನ-ಅಚ್ಚರಿ ಹುಟ್ಟಿಸುತ್ತದೆ. ಇವರು ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳು!

ಸಿನಿಮಾದಂತಹ ಬೇರೆ ಕಲಾ ಕ್ಷೇತ್ರಗಳಲ್ಲಿ ಇಂಗ್ಲಿಷ್, ಹಿಂದಿ ಸೇರಿಸಿ ಮಾತನಾಡುವವರನ್ನೆಲ್ಲಾ ನಾವು ಕನ್ನಡಿಗರ ಆಶಾಕಿರಣ, ಕನ್ನಡದ ಕಂದ ಅಂತೆಲ್ಲಾ ಗೌರವಿಸಿ ಸತ್ಕರಿಸುತ್ತೇವೆ. ಆದರೆ ತಮ್ಮ ಕಲಾ ಪ್ರದರ್ಶನದಲ್ಲಿ ಒಂದೇ ಒಂದು ಇಂಗ್ಲಿಷ್ ಅಕ್ಷರ ನುಸುಳದಂತೆ ಎಚ್ಚರಿಕೆಯಿಂದಲೇ ಕಾಪಾಡುತ್ತಾ ಬಂದಿರುವ ಯಕ್ಷಗಾನ ಸಮುದಾಯ ನಮ್ಮಲ್ಲಿದೆ. ಈ ಪರಿಯಾಗಿ, ಮೌಲಿಕ ಸಾಹಿತ್ಯವನ್ನು, ವಿಚಾರ ಪ್ರಚೋದಕ ಮನರಂಜನೆಯ ಜತೆಜತೆಗೇ ಕಾಪಿಟ್ಟುಕೊಂಡು ಪೋಷಿಸುತ್ತಾ ಬರುತ್ತಿರುವ ಯಕ್ಷಗಾನ ಸಾಹಿತ್ಯಕ್ಕೆ ಹೆಚ್ಚಿನ ನೆಲೆ ಬೆಲೆ ನೀಡಬೇಕಾಗಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರ ಸ್ಥಾಪನೆಯಾಗಿದ್ದು, ಸಾಕಷ್ಟು ಯಕ್ಷಗಾನ ಸಾಹಿತ್ಯ ಕತಿಗಳು ಅಲ್ಲಿಂದಲೂ ಹೊರಬರುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಜತೆಗೆ ಸರಕಾರದ ಸಂಬಂಧಿತ ಇಲಾಖೆಗಳು, ಅಕಾಡೆಮಿ, ಸಂಸ್ಕತಿ ಇಲಾಖೆ, ಸಾಹಿತ್ಯ ಪರಿಷತ್ತು ಗಮನ ಹರಿಸಬೇಕಿರುವುದು ಈ ಕ್ಷಣದ ಅಗತ್ಯ.

***********


ಕೃಪೆ : http://www.vijaykarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ